2012-03-28

ಮರಣವೆಂದರೆ ಭಯವೇಕೆ ? - ವಿದ್ವಾನ್ ಕೆ. ಜಿ. ಸುಬ್ರಾಯ ಶರ್ಮಾ

ಈಗಿನ ಕಾಲದ ಮಾನವನು ಯಾವುದಕ್ಕೂ ಹೆದರುವುದಿಲ್ಲ. ಏಕೆಂದರೆ ಹಣದ ಬಲದಿಂದ, ಅಧಿಕಾರದ ಬಲದಿಂದ,ತನ್ನ ಬುದ್ಧಿಶಕ್ತಿಯ ಬಲದಿಂದ ತಾನು ಏನು ಬೇಕಾದರೂ ಮಾಡಬಲ್ಲೆ ಎಂದು ತಿಳಿದಿದ್ದಾನೆ.ಇದು ಸತ್ಯವೂ ಹೌದು.
ಆದರೆ ಒಂದು ವಿಷಯದಲ್ಲಿ ಮಾತ್ರ ಎಂಥವನೂ ಭಯಪಡುತ್ತಾನೆ. ಅದೇ ಮರಣದ ಭಯ. ಮರಣವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಈ ಮಾನವನು ಬೇಕಾದುದೆಲ್ಲವನ್ನೂ ಮಾಡುತ್ತಾನೆ. ಆದರೆ ಏನೇ ಮಾಡಿದರೂ ಒಂದಲ್ಲ ಒಂದು ದಿನ ಸಾಯಲೇಬೇಕು. (“ಜಾತಸ್ಯ ಮರಣಂ ಧ್ರುವಂ“.)
ಸರಿ , ಏಕೆ ಜನರು ಮರಣಕ್ಕೆ ಅಂಜುತ್ತಾರೆ ? ಎಷ್ಟು ಮುದಿಯಾಗಿದ್ದರೂ ಇನ್ನೂ ಸ್ವಲ್ಪ ಕಾಲ ಬದುಕಬೇಕೆಂದು ಬಯಸುತ್ತಾರೆ . ಈ ಸಾವಿನ ಪ್ರಶ್ನೆಗೆ ಋಷಿಗಳ ಉತ್ತರ --
“ಪ್ರಾಯೇಣಕೃತಕೃತ್ಯತ್ವಾತ್  ಮೃತ್ಯೋರುದ್ವಿಜತೇ ಜನಃ |
ಕೃತಕೃತ್ಯಾಃಪ್ರತೀಕ್ಷಂತೇ ಮೃತ್ಯುಂ ಪ್ರಿಯಮಿವಾತಿಥಿಂ || “
ಅಕೃತ್ಯಕೃತ್ಯರಾಗಿರುವುದರಿಂದಲೇ ಪ್ರಾಯಶಃ ಜನರು ಮರನವೆಂದರೆ ಗಾಬರಿಪಡುತ್ತಾರೆ. ಆದರೆ, ಕೃತಕೃತ್ಯರಾದ ಧೀರರಾದರೋ, ಸಂತೋಷದಿಂದ ಅತಿಥಿಯನ್ನು ನಿರೀಕ್ಷಿಸುವಂತೆ ಮರಣವನ್ನು ಸ್ವಾಗತಿಸುತ್ತಾರೆ. ಅವರು ಮರಣಕ್ಕೆ ಅಂಜುವುದಿಲ್ಲ.
ಎಷ್ಟೇ ವಯಸ್ಸಾಗಿದ್ದರೂ, ಸಂಕಟದಲ್ಲಿದ್ದರೂ, ದುಃಖದಲ್ಲಿದ್ದರೂ ಏಕೆ ಬದುಕಲು ಬಯಸುತ್ತಾರೆಂದರೆ ,  ಅವರ ಮನಸ್ಸಿನಲ್ಲಿ ಕರ್ತವ್ಯ ಬುದ್ಧಿಯು ತುಂಬಿರುತ್ತದೆ. “ನಾನು ಕೃತಕೃತ್ಯನಾಗಿದ್ದೇನೆ , ನಾನು ಕೃತಾರ್ಥನಾಗಿದ್ದೇನೆ” – ಎಂದು ತಿಳಿದವನಿಗೆ ಮರಣದ ಭಯವುಂಟೇ?
 ಭಯಪಟ್ಟಮಾತ್ರಕ್ಕೆ ಮೃತ್ಯುವು ಅವನನ್ನು ಬಿಟ್ಟುಬಿಡುವನೇ? ಖಂಡಿತಾ ಇಲ್ಲ! ಹಾಗಾದರೆ ಮೃತ್ಯುವು ನಮ್ಮ ಬಳಿಗೆ ಬಾರದಂತೆ ಮಾಡಿಕೊಳ್ಳಲು ನಾವುಗಳು ಏನು ಮಾಡಬೇಕೆಂದರೆ  -
“ ಮ್ರುತ್ಯೋರ್ಣಭೇಷಿ ಕಿಂ ಮೂಢ ? ಜಾತಂ ಮುಂಚತಿ ಕಿಂ ಯಮಃ ?
ಅಜಾತಂ ನೈವ ಗೃಹ್ಣಾತಿ ಕುರು ಯತ್ನಂ ಅಜನ್ಮನಿ || “
ರೇ ಮೂಢ , ಮರಣವೆಂದರೆ ಯಾಕೆ ಹೆದರುತ್ತೀಯೋ? ಹುಟ್ಟಿದ ಯಾರನ್ನೇ ಆಗಲಿ ಮೃತ್ಯುವು ಬಿಡುತ್ತಾನೆಯೇ ? ಹುಟ್ಟದಿರುವವನ್ನನ್ನು ಮೃತ್ಯುವು ಮುಟ್ಟುವುದೇ ಇಲ್ಲ. ಆದ್ದರಿಂದ ಪುನಃ ಹುಟ್ಟದಂತೆ ನಿನ್ನನ್ನು ಮಾಡಿಕೋ. ಜನ್ಮರಹಿತನಾದ ಆತ್ಮನೇ ತಾನೆಂದು ತಿಳಿದಾಗ ಅವನಿಗೆ ಮರಣವು ಎಲ್ಲಿದೆ ? ಇಂತಹ ಅಜನಾದ ಆತ್ಮನನ್ನು ತಿಳಿದು ನಾವು ಮರಣದ ಭಯವನ್ನು ಗೆಲ್ಲೋಣವೇ ?

0 comments:

Post a Comment

Share

Twitter Delicious Facebook Digg Stumbleupon Favorites More